ಶಿಕಾರಿಪುರದ ಬಗ್ಗೆ
ಶಿಕಾರಿಪುರವು ಶಿವಮೊಗ್ಗ ಜಿಲ್ಲೆ ವ್ಯಾಪ್ತಿಗೆ ಬರುವ ತಾಲ್ಲೂಕು ಪ್ರಧಾನ ಕಾರ್ಯಸ್ಥಾನವಾಗಿದೆ. ಶಿವಮೊಗ್ಗ ನಗರದಿಂದ ಕೇವಲ 48 ಕಿ.ಮೀ ದೂರದಲ್ಲಿದ್ದು, ಎಲ್ಲಾ ಪ್ರಮುಖ ಸ್ಥಳಗಳಿಗೆ ಬಸ್ಸಿನ ಸೌಕರ್ಯವನ್ನು ಹೊಂದಿದೆ. ಶಿಕಾರಿಪುರವು ಸಮೃದ್ಧ ಸಾಂಸ್ಕೃತಿಕ ಪರಂಪರೆ, ರಮಣೀಯ ಸೌಂದರ್ಯ ಮತ್ತು ಅಕ್ಷರನಿಧಿಗೆ ಪ್ರಸಿದ್ಧಿಯಾಗಿದೆ. ಇದು ಕದಂಬ ಮತ್ತು ಹೊಯ್ಸಳ ಸಾಮ್ರಾಜ್ಯದ ವಿದ್ಯಾಕೇಂದ್ರಗಳಾದ ಅಗ್ರಹಾರ ಮತ್ತು ಘಟಿಕಾಸ್ಥಾನ, ದೇವಸ್ಥಾನ (ಮಠ), ಬ್ರಹ್ಮಪುರಿ ಇತ್ಯಾದಿಗಳ ಮೂಲಕ ಶಿಕ್ಷಣವನ್ನು ನೀಡಿದ ಹಿರಿಮೆಯನ್ನು ಹೊಂದಿದೆ. ಶಿಕಾರಿಪುರದ ತಾಳಗುಂದವು ಕರ್ನಾಟಕದ ಮೊಟ್ಟಮೊದಲ ವಿದ್ಯಾಕೇಂದ್ರವಾಗಿದೆ. ಕನ್ನಡದ ಮೊಟ್ಟಮೊದಲ ಸಾಮ್ರಾಜ್ಯವಾದ ಕದಂಬರಾಜವಂಶದ ಸ್ಥಾಪಕ ಮಯೂರಶರ್ಮ ಇಲ್ಲಿ ಅಧ್ಯಯನಕ್ಕೆ ತೊಡಗಿದ ಮೊದಲ ವಿದ್ಯಾರ್ಥಿಯಾಗಿದ್ದನು . 12ನೇ ಶತಮಾನದ ಪ್ರಮುಖ ವಚನಕಾರರು ಹಾಗೂ ಸಮಾಜ ಸುಧಾರಕರಾದ ಅಲ್ಲಮಪ್ರಭು, ಅಕ್ಕಮಹಾದೇವಿ, ಮುಕ್ತಾಯಕ್ಕ, ಜಕ್ಕಲಾಂಬಿಕೆಯವರಂತವರನ್ನು ನೀಡಿದ ಹಿರಿಮೆ ಶಿಕಾರಿಪುರದ್ದಾಗಿರುತ್ತದೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು ಹಾಗೂ ಶಿಕಾರಿಪುರ ತಾಲೂಕಿನ ಪ್ರತಿನಿಧಿಯಾಗಿರುವ ಸನ್ಮಾನ್ಯ ಶ್ರೀ ಬಿ.ಎಸ್.ಯಡಿಯೂರಪ್ಪರವರು ಈ ಸಂಸ್ಥೆಯ ಕತೃಗಳಾಗಿ ಮಾರ್ಗದರ್ಶಿಸುತ್ತಿದ್ದಾರೆ.